ರಾಜಸ್ತಾನಿ ಸಾಹಿತ್ಯ

ಶ್ರೀಮಂತವೂ ವೈವಿಧ್ಯಪೂರ್ಣವೂ ಆದ ರಾಜಸ್ತಾನಿ ಸಾಹಿತ್ಯಕ್ಕೆ ಸುದೀರ್ಘ ಇತಿಹಾಸವಿದೆ. ರಾಜಸ್ತಾನಿ ಸಾಹಿತ್ಯವನ್ನು ಆರಂಭಯುಗ, ಮಧ್ಯಯುಗ ಮತ್ತು ಆಧುನಿಕ ಯುಗವೆಂದು ಮೂರು ಭಾಗಗಳಾಗಿ ವಿಂಗಡಿಸಬಹುದು.

ಆರಂಭಯುಗ : 1150-1550. ಈ ಯುಗದಲ್ಲಿ ಹೆಚ್ಚಿನ ಸಾಹಿತ್ಯವನ್ನು ಜೈನ ಸಾಹಿತಿಗಳು ರಚಿಸಿದರು. ಈ ಕಾಲಖಂಡದಲ್ಲಿ ಧನಪಾಲ, ಜಿನವಲ್ಲಭಸೂರಿ, ವಾದಿದೇವಸೂರಿ, ಶಾಲಿಭದ್ರಸೂರಿ, ಜಿನೇಶ್ವರಸೂರಿ, ಜಿನಪ್ರಭಸೂರಿ, ಉದ್ಯೋತನಸೂರಿ, ಹರಿಭದ್ರಸೂರಿ, ಜಯಸಿಂಹಸೂರಿ ಮೊದಲಾದ ಐವತ್ತು ಮಂದಿ ಗ್ರಂಥಕಾರರು ಕಂಡುಬರುತ್ತಾರೆ.
ಉದ್ಯೋತನಸೂರಿ ಜಾಲಾರ್‍ನಲ್ಲಿ ಕುವಲಯಮಾಲಾ ಎಂಬ ಭಾಷಾ ವಿಷಯಕ ಗ್ರಂಥವನ್ನು ರಚಿಸಿದ. ಹರಿಭದ್ರಸೂರಿ ಪ್ರಕಾಂಡ ಪಂಡಿತನಾಗಿದ್ದ. ಜೈನ ಹಾಗೂ ಜೈನೇತರ ಹೀಗೆ ಎರಡೂ ದರ್ಶನಗಳ ಮೇಲೆ ಇವನಿಗೆ ಸಮಾನ ಪ್ರಭುತ್ವವಿತ್ತು. ಇವನು ಸುಮಾರು 100 ಗ್ರಂಥಗಳನ್ನು ರಚಿಸಿದ್ದಾನೆ. ಈತ ಚಿತ್ತೋಡಿನಲ್ಲಿ ನೆಲಸಿ ಉಪಮಿತಿಭವ ಪ್ರಪಂಚಕಥಾ ಎಂಬ ಮಹಾನ್ ಗ್ರಂಥವನ್ನು ರಚಿಸಿದ. ಇದರಲ್ಲಿ 16,000 ಶ್ಲೋಕಗಳಿವೆ. ಈತ ಧೂರ್ತಾಖ್ಯಾನ ಎಂಬ ಕಥಾಸಂಗ್ರಹವನ್ನೂ ಬರೆದಿದ್ದಾನೆ. ಹನ್ನೆರಡನೆಯ ಶತಮಾನದಲ್ಲಿದ್ದ ಜಿನೇಶ್ವರಸೂರಿ ಪ್ರಖ್ಯಾತ ಜೈನ ಆಚಾರ್ಯ. ಈತ ಜೈನನ್ಯಾಯಕ್ಕೆ ಸಂಬಂಧಿಸಿದ ಗ್ರಂಥವನ್ನೂ ಕಥಾಕೋಶವನ್ನೂ ರಚಿಸಿದ್ದಾನೆ. ಇವನ ಶಿಷ್ಯನಾಗಿದ್ದ ಧನೇಶ್ವರಸೂರಿ `ಸುರಸುಂದರೀ ಕಥೆಯನ್ನು ಬರೆದಿದ್ದಾನೆ. ಜಿನಚಂದ್ರಸೂರಿ ಸವೇಗರಂಗಶಾಲಾ ಎಂಬ ಗ್ರಂಥವನ್ನು ರಚಿಸಿದ್ದಾನೆ. ಅಭಯದೇವಸೂರಿ ಶೃಂಗಾರ ಶತಕ ಎಂಬ ಗ್ರಂಥವನ್ನೂ ಅನೇಕ ಸ್ತೋತ್ರಗಳನ್ನೂ ರಚಿಸಿದ್ದಾನೆ. ವಾದಿದೇವಸೂರಿ ನ್ಯಾಯಶಾಸ್ತ್ರದ ಬಗ್ಗೆ ಗ್ರಂಥ ರಚಿಸಿದ್ದಾನೆ. ಜಿನಪತಿಸೂರಿ ಗುರ್ವಾವಲೀ ಎಂಬ ಗ್ರಂಥ ರಚಿಸಿದ್ದು ಇದರಲ್ಲಿ ಸಮಸ್ತ ಜೈನ ಆಚಾರ್ಯರ ಕಾಲ ಹಾಗೂ ಸ್ಥಾನಗಳ ಸಹಿತ ಅವರ ಚರಿತ್ರೆಗಳನ್ನು ವರ್ಣಿಸಿದ್ದಾನೆ. ಧರ್ಮಘೋಷಸೂರಿಯ ಧರ್ಮಕಲ್ಪದ್ರುಮವನ್ನೂ ಲಕ್ಷ್ಮೀತಿಲಕನ `ಪ್ರತ್ಯೇಕ ಬುದ್ಧಚರಿತ್ರೆಯನ್ನೂ ನಯಚಂದ್ರಸೂರಿಯ `ಹಮೀರ ಮಹಾಕಾವ್ಯವನ್ನೂ ಇಲ್ಲಿ ಉಲ್ಲೇಖಿಸಬಹುದು. ಈ ಕಾಲಖಂಡದ ಸಮಸ್ತ ಜೈನ ಸಾಹಿತ್ಯ ರಾಸೋ, ಚೌಪದಿಫಾಗ, ಭಾರಹಮಾಸಿ, ಚೌಮಾಸಿ ಸಂವಾದ, ಧವಲ, ದೂಹ, ಗಜಲ್, ಮಾತೃಕ, ಸ್ತವನ, ಸೂಙ್ಮಯ, ಪತ್ರಾವಳಿ ಎಂಬ ಪ್ರಕಾರಗಳಿಂದ ವೈವಿಧ್ಯಪೂರ್ಣವಾಗಿದೆ.

ಈ ಕಾಲದಲ್ಲಿ ರಾಜಸ್ತಾನದಲ್ಲಿ ಅನೇಕ ಚಾರಣಕವಿಗಳು ಆಗಿಹೋದರು. ಈ ಚಾರಣಕವಿಗಳು ತಂತಮ್ಮ ಆಶ್ರಯದಾತ ರಾಜರ ಪ್ರಶಸ್ತಿಯನ್ನು ಬರೆದಿದ್ದಾರೆ. ಯುದ್ಧಕಾಲದಲ್ಲಿ ಈ ಕವಿಗಳು ರಣಭೂಮಿಗೂ ತೆರಳುತ್ತಿದ್ದರು. ಅಲ್ಲಿ ವೀರ ಕಾವ್ಯವನ್ನು ಹಾಡಿ ವೀರಭಟರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಚಾರಣಕವಿಗಳ ಸಾಹಿತ್ಯ ವೀರರಸಪ್ರಧಾನವಾಗಿದೆ. ಈ ಬಗೆಯ ದ್ವಿಪದಿ ಸಾಹಿತ್ಯ ರಾಜಸ್ತಾನದಲ್ಲಿ ಅತ್ಯಂತ ಪ್ರಚುರವಾಗಿದ್ದು, ಇಂದಿಗೂ ಅಲ್ಲಿ ಅದು ಬಳಕೆಯಲ್ಲಿದೆ.

ಮಧ್ಯಯುಗ : ಮಧ್ಯಯುಗದಲ್ಲಿ ರಾಜಸ್ತಾನದಲ್ಲಿ ಅನೇಕ ಭಾಷೆಗಳಲ್ಲಿ ವಿಪುಲ ಸಾಹಿತ್ಯ ರಚನೆಯಾಗಿದೆ. ಈ ಕಾಲದಲ್ಲಿ ಎಲ್ಲಕ್ಕೂ ಮಿಗಿಲಾಗಿ ಮಾರವಾಡಿ ಸಾಹಿತ್ಯಕ್ಕೆ ಅಧಿಕ ಗೌರವ ಸ್ಥಾನಮಾನ ದೊರೆಯಿತು. ಮಾರವಾಡಿ ಇದು ಸಮಗ್ರ ರಾಜಸ್ತಾನದ ಸಾಹಿತ್ಯ ಭಾಷೆಯಾಯಿತು. ಆ ಕಾಲದಲ್ಲಿ ಸಂತಕಾವ್ಯ, ವೀರಕಾವ್ಯ ಮತ್ತು ಶೃಂಗಾರಕಾವ್ಯ ಹೀಗೆ ವಿವಿಧ ಬಗೆಯ ಸಾಹಿತ್ಯ ರಚನೆ ಆಯಿತು. ಅಗ್ರದಾಸನೆಂಬ ಸಂತನು ಕೃಷ್ಣದಾಸ ಪಯಹರಿ ಎಂಬಾತನ ಪ್ರಮುಖ ಶಿಷ್ಯನೂ ರಾಮಭಕ್ತನೂ ಆಗಿದ್ದ. ಇವನು ಶ್ರೀರಾಮ ಭಜನಮಂಜರಿ, ಪದಾವಳಿ, ಹಿತೋಪದೇಶ ಭಾಷಾ ಎಂಬ ಗ್ರಂಥಗಳನ್ನು ರಚಿಸಿದ. ಅಗ್ರದಾಸನ ಶಿಷ್ಯ ನಾರಾಯಣದಾಸನು ಭಕ್ತಮಾಲಾ ಎಂಬ ಗ್ರಂಥ ರಚಿಸಿದ್ದಾನೆ. ಇದರಲ್ಲಿ ಅನೇಕ ಭಕ್ತರ ಚರಿತ್ರೆಗಳ ವರ್ಣನೆಯಿದೆ. ಸಂತಮೀರಾಬಾಯಿ ಇದೇ ಕಾಲದವಳು. ಆಕೆಯ ಅನೇಕ ಪದ್ಯಗಳು ರಾಜಸ್ತಾನಿ ಭಾಷೆಯಲ್ಲಿವೆ. ಆಶಾನಂದ ಎಂಬ ಚಾರಣಕವಿ ಲಕ್ಷಣಾಯನ, ನಿರಂಜನಪ್ರಾಣ, ಗೋಗಾ ಜೀರಿ ಪೇಡಿ ಇತ್ಯಾದಿ ಆರು ಗ್ರಂಥಗಳನ್ನು ರಚಿಸಿದ್ದಾನೆ. ಮಾಲದೇವನೆಂಬ ವೀರಶ್ರೇಷ್ಠನ ಮರಣಾನಂತರ ಆತನ ಭಾರ್ಯೆ ಉಮಾದೇವಿ ಎಂಬಾಕೆ ಸತಿಯಾದ ಪ್ರಸಂಗವನ್ನು ಕವಿ ಚಿತ್ರಿಸಿದ್ದಾನೆ.

ಈಸನದಾಸನೆಂಬ ಚಾರಣಕವಿ ರೋಹಾಡಿಯ ಶಾಖೆಗೆ ಸೇರಿದವನು. ಈತ ಭಕ್ತ ಹಾಗೂ ಚಮತ್ಕಾರಿ ಪುರುಷನಾಗಿದ್ದ. ಈತನ ಅನೇಕ ಸಂತಕಥೆಗಳು ರಾಜಸ್ತಾನದಲ್ಲಿ ಪ್ರಚಲಿತವಿದೆ. ಈಸರಾಸೋ ಪರಮೇಸರಾ (ಈಸರ ದಾಸನೆಂದರೆ ಪರಮೇಶ್ವರ) ಎಂದು ಅಲ್ಲಿಯ ಜನ ಇವನ ಪೂಜೆ, ಪ್ರಾರ್ಥನೆ ಮಾಡುತ್ತಾರೆ. ಹರಿರಸ, ಹಾಲಾ ಝಾಲಾಂ ರಾಕುಂಡಲಿಯಾ ಎಂಬ ಈತನ ಎರಡು ಗ್ರಂಥಗಳು ಲೋಕಪ್ರಿಯವಾಗಿವೆ. ಎರಡನೆಯ ಗ್ರಂಥ ವೀರರಸ ಪ್ರಧಾನವಾದುದು.

ಕೇಶವದಾಸನೆಂಬ ಕವಿ ಗುಣರೂಪಕ, ರಾವ್ ಅಮರಸಿಂಹಜೀರಾದೂಹಾ, ವಿವೇಕವಾರ್ತಾ ಎಂಬ ಮೂರು ಗ್ರಂಥಗಳನ್ನು ರಚಿಸಿದ್ದಾನೆ. ಮಹಾರಾಜ ರಾಯಸಿಂಹನ ಹಿರಿಯ ಸಹೋದರನಾದ ಪೃಥ್ವೀರಾಜ ರಾಠೋಡ್ ಉತ್ತಮ ಕವಿ ಹಾಗೂ ವೀರನೂ ಆಗಿದ್ದ. ವೇಲಿಕ್ರಿಸನ ರುಕ್ಷಿಣೀರೀ ಎಂಬುದು ಇವನ ಉತ್ಕøಷ್ಟ ಕೃತಿ. ಇದು ವೇಲಿಯೊ ಎಂಬ ಛಂದಸ್ಸಿನಲ್ಲಿ ಬರೆದ 305 ಪದ್ಯಗಳನ್ನೊಳಗೊಂಡ ಒಂದು ಖಂಡಕಾವ್ಯ.

ದೂರಸಾಜೀ ಹಾಹೀ ಮತ್ತೊಬ್ಬ ಚಾರಣಕವಿ. ಈತನ ಕಾವ್ಯ ವಿಶುದ್ಧ ಡಿಂಗಲ್ ಭಾಷೆಯ ನಮೂನೆಯೆಂದು ಭಾವಿಸಲಾಗಿದೆ. ಕುಶಲಲಾಭ ಹಾಹೀ ಎಂಬಾತ ಕೂಡ ಕವಿಯೂ ಪಂಡಿತನೂ ಆಗಿದ್ದ. ಡೋಲಾ ಮಾರೂರಿ ಚೌಪಾ ಈ ಮತ್ತು ಮಾಧವಾನಲ ಕಾಮಕಂದಲಾ ಎಂಬ ಇವನ ಎರಡು ಕೃತಿಗಳು ಲೋಕಪ್ರಿಯವಾಗಿವೆ. ಪರಶುನಾಮ ಎಂಬ ನಿಂಬಾರ್ಕ ಸಂಪ್ರದಾಯದ ಕವಿ 22 ಗ್ರಂಥಗಳನ್ನು ರಚಿಸಿದ. ಈತ ಸಗುಣ-ನಿರ್ಗುಣ ಎಂಬ ದೋಹಾ ಉಪಾಸಕನಾಗಿದ್ದ. ಮಾಧೋದಾಸನೆಂಬ ಹರಿಭಕ್ತ ಉನ್ನತಮಟ್ಟದ ಕವಿಯಾಗಿದ್ದ. ಈತ ರಾಮದಾಸೌ, ಭಾಷಾ ದಶಮಸ್ಕಂಧ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾನೆ.

ಈ ಯುಗದಲ್ಲಿ ಮಾರವಾಡಿ (ಡಿಂಗಲ್) ಸಾಹಿತ್ಯದ ಜೊತೆಗೆ ಪಿಂಗಲ್ ಭಾಷೆಯಲ್ಲಿಯೂ ಒಳ್ಳೆಯ ಪ್ರಗತಿಯುಂಟಾಯಿತು. ಈ ಎರಡೂ ಭಾಷೆಗಳಲ್ಲಿ ಉನ್ನತ ಮಟ್ಟದ ಗ್ರಂಥಗಳು ರಚಿತವಾದವು. ಕೃಷ್ಣವಿಷಯ ಈ ಯುಗದ ಕವಿಗಳಿಗೆ ಪ್ರಿಯವಾಗಿತ್ತು. ಹೀಗಾಗಿ ರಾಧಾಕೃಷ್ಣರ ಪ್ರೇಮಲೀಲೆಯ ಮೇಲೆ ಅನೇಕ ಶೃಂಗಾರ ಪ್ರಧಾನವಾದ ಗ್ರಂಥಗಳು ರಚನೆಯಾದವು. ವೀರರಸ ಪ್ರಧಾನವಾದ ಕೃತಿಗಳನ್ನು ರಚಿಸಿದ ಕವಿಗಳಲ್ಲಿ ಬಿಹಾರೀಲಾಲ್, ವೃಂದ ಮತ್ತು ನಾಗರೀದಾಸ ವಿಶೇಷ ಉಲ್ಲೇಖನೀಯರಾಗಿದ್ದಾರೆ. 17ನೆಯ ಶತಮಾನದ ಉತ್ತರಾರ್ಧದಲ್ಲಿ ಮಾಧೋದಾಸ ದಧೆವಾಡಿಯಾ ಎಂಬಾತ ರಾಮರಾಸೋ ಎಂಬ ಕೃತಿಯನ್ನು ಬರೆದು ರಾಸೋ ಪ್ರಕಾರಕ್ಕೆ ವಿಶೇಷ ಮನ್ನಣೆಯನ್ನು ದೊರಕಿಸಿಕೊಟ್ಟ. ಖುಮಾಣ ರಾಸೋ, ಪೃಥ್ವೀರಾಜ ರಾಸೋ, ರಾಣಾ ರಾಸೋ, ಹಮೀರ ರಾಸೋ ಹೀಗೆ ಅನೇಕ ಗ್ರಂಥಗಳು ರಾಸೋ ಶೈಲಿಯಲ್ಲಿ ರಚನೆಗೊಂಡವು.

ಆಧುನಿಕ ಯುಗ : ಸೂರಜ್‍ಮಲ್ ಎಂಬಾತ ಆಧುನಿಕ ಯುಗದ ಮೊದಲ ರಾಜಸ್ತಾನಿ ಕವಿ. ಚಾರಣಲೋಕವು ಇವನನ್ನು ತಮ್ಮ ವರ್ಗದ ಶ್ರೇಷ್ಠ ಕವಿ ಎಂದು ಭಾವಿಸಿತ್ತು. ಬಂಗಾಲದಲ್ಲಿ ಹೇಗೆ ರವೀಂದ್ರನಾಥ ಟಾಗೋರರ ಪ್ರಭಾವ ತತ್ಕಾಲೀನ ಹಾಗೂ ಉತ್ತರಕಾಲೀನ ಕವಿಗಳ ಮೇಲೆ ಆಗಿದೆಯೋ ಹಾಗೆಯೇ ಸೂರಜ್‍ಮಲ್‍ನ ಪ್ರಭಾವ ರಾಜಸ್ತಾನದಲ್ಲಿ ಆಧುನಿಕ ಯುಗದ ಕವಿಗಳ ಮೇಲೆ ಆಗಿದೆ ಎನ್ನಲಾಗಿದೆ. ಸೂರಜ್‍ಮಲ್ ಮಹತ್ತ್ವದ ಪ್ರತಿಭಾಶಾಲಿ ಕವಿ. ವಂಶ ಭಾಸ್ಕರ. ವೀರಸತಸ ಈ (ಅಪೂರ್ಣ), ಬಲವಂತ ವಿಲಾಸ, ಛಂದೋಮೂತ್ವ-ಇವು ಇವನ ಪ್ರಮುಖ ಗ್ರಂಥಗಳು. ಇವನಿಗೆ ವೀರರಸ ಪ್ರಿಯವಾಗಿತ್ತು. ಮಹಾರಾಜ ಚತುರಸಿಂಹ ಎಂಬಾತ ಕೂಡ ಬಹುಭಾಷಾಕವಿ. ಈತ ಅನೇಕ ಕಾವ್ಯಗಳನ್ನು ರಚಿಸಿದ್ದಾನೆ. ಮೇವಾಡದಲ್ಲಿ ಮನೆಮನೆಗಳಲ್ಲಿ ಇವನ ಕವಿತೆಯ ಪ್ರಭಾವವಿದೆ. ಸಂತಮೀರಾಬಾಯಿಯ ಅನಂತರ ಮೇವಾಡದ ಜನಪ್ರಿಯ ಕವಿಯೆಂದರೆ ಇವನೇ.

ಆಧುನಿಕ ರಾಜಸ್ತಾನಿ ಸಾಹಿತ್ಯದ ಪ್ರಾರಂಭ ಭಾರತದ ರಾಷ್ಟ್ರೀಯ ಆಂದೋಲನದ ಸಂದರ್ಭದಲ್ಲಿ ಆಯಿತು. ಈ ಕಾಲದಲ್ಲಿ ಅನೇಕ ರಾಷ್ಟ್ರಪ್ರೇಮಿ ಕವಿಗಳು ಆಗಿಹೋಗಿದ್ದಾರೆ. ಇವರು ಭಾರತದ ಗುಲಾಮಗಿರಿಯ ವಿರುದ್ಧ ತಮ್ಮ ಧ್ವನಿ ಎತ್ತಿದರು. ಶಾಹಪುರಾದ ಬಾರದ ಕೇಶರಿ ಸಿಂಹ ಸೋದಾ ಈ ಕಾಲದ ಪ್ರಮುಖಕವಿ. ಈತ ಸಾಹಿತ್ಯ ರಚನೆಯ ಜೊತೆಗೆ ಬ್ರಿಟಿಷರ ವಿರುದ್ಧಕ್ರಾಂತಿಕಾರೀ ರಾಜಕಾರಣದಲ್ಲಿಯೂ ಭಾಗವಹಿಸಿದ ಹಾಗೂ ಬಂಡಾಯ ಕಾವ್ಯ ರಚನೆ ಮಾಡಿದ. ಕೇಶರೀಸಿಂಹನ ಅನುಯಾಯಿಯಾಗಿದ್ದ ನಾಥೂರಾಮ್ ಮಹಿಯಾರಿಯ ಎಂಬಾತ ವೀರಸತಸ ಈ ಎಂಬ ಕೃತಿಯನ್ನು ರಚಿಸಿದ್ದಾನೆ. ಉದಯರಾಜ ಎಂಬಾತ ರಾಷ್ಟ್ರೀಯ ಆಂದೋಲನದಲ್ಲಿ ವೀರಗೀತೆಗಳನ್ನು ರಚಿಸಿ ಹಾಡಿದ. ಠಾಕೂರ ರಾಮಸಿಂಹ ನವ್ಯಕಾವ್ಯಧಾರೆಯ ಅಗ್ರದೂತನಾಗಿದ್ದ. ಮರುಮಯಂಕ, ಮೇಹ ಹಾಗೂ ಧರಾ-ಇವು ಇವನ ಎರಡು ಉತ್ಕøಷ್ಟ ಕಾವ್ಯಗಳು. ಮಾನವತೆ ಮತ್ತು ಮಾತೃಭೂಮಿ ಇವನ ಕಾವ್ಯದ ಕೇಂದ್ರನೆಲೆ. ಇವನು ರಚಿಸಿದ `ಮಾತೃ ಭಾಷಾ ರೋ ರಾಜಸ್ತಾನದ ನಾಡಗೀತೆಯಾಗಿದೆ. ಮುರಲೀಧರ ಕವಿಯ ದೋಹಗಳು ರಸಿಕರ ಪ್ರೇಮಕ್ಕೆ ಪಾತ್ರವಾಗಿವೆ. ನವ್ಯಕವಿಗಳಲ್ಲಿ ಕನ್ನಯ್ಯಾಲಾಲ್ ಸೇಠಿಯಾ ಅವರು ಉಚ್ಚಕೋಟಿಯವರೆಂದು ಗಣಿಸಲಾಗಿದೆ. ಚಂದ್ರಸಿಂಹ ರಾಜಸ್ತಾನಿ ಭಾಷೆಯ ನಿಸರ್ಗಕವಿ. ನಾನೂರಾಮ್ ಗ್ರಾಮೀಣ ಪ್ರಕೃತಿಪ್ರಿಯ ಕವಿಯಾಗಿದ್ದ. ಇವರಿಬ್ಬರೂ ರಾಜಸ್ತಾನದಲ್ಲಿ ಜನಪ್ರಿಯರಾಗಿದ್ದರು.
ಶಿವಚಂದ್ರ ಭಾರತೀಯ ಪ್ರಥಮ ರಾಜಸ್ತಾನಿ ನಾಟಕಕಾರ. ಕೇಶರ ವಿಕಾಸ, ಬುಡಾಪೇ ಕೀ ಸಗಾಈ, ಘಾಟ್ ಕಾ ಜಂಜಾಲ್ ಎಂಬ ಮೂರು ನಾಟಕಗಳನ್ನು ಬರೆದಿದ್ದಾನೆ. ಭಗವತೀ ಪ್ರಸಾದ ದಾರುಕಾ ಇನ್ನೊಬ್ಬ ಪ್ರಸಿದ್ಧ ನಾಟಕಕಾರ. ಈತ ಐದು ನಾಟಕಗಳನ್ನು ಬರೆದಿದ್ದಾನೆ.

ಮುರಲೀಧರ ವ್ಯಾಸ ರಾಜಸ್ತಾನಿ ಭಾಷೆಯ ಯಶಸ್ವೀ ಕಥಾ ಲೇಖಕ. ಈತ ಕೌಟುಂಬಿಕ ಹಾಗೂ ಸಾಮಾಜಿಕ ಸಂಬಂಧಗಳಿಗೆ ಮಹತ್ತ್ವ ನೀಡಿದ್ದಾನೆ. ಮುನ್ನಾಲಾಲ್ ತನ್ನ ಕಥೆಗಳಲ್ಲಿ ರಾಜಸ್ತಾನಿ ವೀರತೆಯನ್ನು ಪ್ರಶಂಸಿಸಿದ್ದಾನೆ.

ಆಧುನಿಕ ರಾಜಸ್ತಾನಿ ಗದ್ಯ ಲೇಖಕರಲ್ಲಿ ಗುಲಾಬ್‍ಚಂದ್ ನಾಗೋರಿ, ಅಗರ್ ಚಂದ್ ನಾಹತಾ, ಭಂವರ್‍ಲಾಲ್‍ನಾಹತಾ ಮತ್ತು ಚಂದ್ರಸಿಂಹ ವಿಶೇಷ ಉಲ್ಲೇಖನೀಯರು. ಮೋತಿಲಾಲ್ ಮೆನಾರಿಯಾ ಇತಿಹಾಸ ಲೇಖಕನೆಂದು ಪ್ರಸಿದ್ಧನಾಗಿದ್ದಾನೆ. ಸೂರ್ಯಕಿರಣ ಪಾರೀಖ್ ಮತ್ತು ನರೋತ್ತಮದಾಸ ಇವರು ಜನಪದ ಸಾಹಿತ್ಯದ ಪರಾಮರ್ಶೆ ನಡೆಸಿದ್ದಾರೆ.
ಜನಪದ ಸಾಹಿತ್ಯ : ರಾಜಸ್ತಾನದ ವಿವಿಧ ಭಾಷೆಗಳಲ್ಲಿ ಅದರಲ್ಲಿಯೂ ಮಾರವಾಡಿ ಭಾಷೆಯಲ್ಲಿ ಜನಪದ ಸಾಹಿತ್ಯ ವಿಪುಲವಾಗಿದೆ. ಗೀತೆ, ಪವಾಡೆ, ಪಡೇ, ಸಿಲೋಕೆ, ಮ್ಹಣೀ, ಬಾತ, ಖ್ಯಾತ ಇತ್ಯಾದಿ ಮೌಖಿಕ ಸಾಹಿತ್ಯ ಪ್ರಕಾರಗಳು ಇಂದಿಗೂ ರಾಜಸ್ತಾನಿ ಜನಜೀವನದಲ್ಲಿ ಮಹತ್ತ್ವಪೂರ್ಣ ಸ್ಥಾನ ಪಡೆದಿವೆ.

ಢೋಲಾಮಾರೂ-ರಾ-ದೂಹಾ ಎಂಬುದು ರಾಜಸ್ತಾನಿ ಭಾಷೆಯಲ್ಲಿನ ಪ್ರಾಚೀನ ಹಾಗೂ ಪ್ರಸಿದ್ಧ ಜನಪದಗೀತೆಯಾಗಿದೆ. ಇದರ ಹಲವಾರು ರೂಪಾಂತರಗಳು ಸಿಗುತ್ತವೆ. ಇದೊಂದು ಗಂಭೀರ ಪ್ರೇಮಾಖ್ಯಾನ. ಢೋಲಾ ಎಂಬ ಹೆಸರಿನ ರಾಜಕುಮಾರ ಹಾಗೂ ಮಾರೂ, ಮಾರವಣೀ ಎಂಬ ರಾಜಕನ್ಯೆಯರ ಗಾಢಪ್ರೇಮದ ಕಥೆ ಇದರಲ್ಲಿ ವರ್ಣಿತವಾಗಿದೆ.
`ಬೀಸಲದೇವ ರಾಸೋ ಇದೇ ರೀತಿಯ ಒಂದು ಜನಪದ ಗೀತೆ. ಇದು ಸುಮಾರು 350 ಪದ್ಯಗಳ ಕಾವ್ಯವಾಗಿದ್ದು 17ನೆಯ ಶತಮಾನದಲ್ಲಿ ಪುಸ್ತಕ ರೂಪದಲ್ಲಿ ಹೊರಬಂತು.
`ರುಕ್ಮಿಣೀ ಮಂಗಲ ಮತ್ತೊಂದು ಜನಪ್ರಿಯ ಕಾವ್ಯ. ಪದಮ ತೇಲೀ ಎಂಬ ಕವಿ ಇದನ್ನು ರಚಿಸಿದ. ಈ ಕಾವ್ಯದಲ್ಲಿ ಸುಮಾರು 2500 ಶ್ಲೋಕಗಳಿವೆ. ಇದರಲ್ಲಿ ಕೃಷ್ಣ ರುಕ್ಮಿಣಿಯರ ವಿವಾಹದ ಕಥೆ ವರ್ಣಿತವಾಗಿದೆ. ಅನೇಕ ಜನಪದ ಕವಿಗಳು ಈ ಕಥೆಯನ್ನು ಬರೆದಿದ್ದಾರೆ. `ನರಸೀ ಜೀ ಮಾಹೇರಿ ಇದೇ ಪ್ರಕಾರದ ಲೋಕಪ್ರಿಯ ಕಾವ್ಯ. ರಾಜಸ್ತಾನದಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ. ಈ ಕಾವ್ಯಗಳನ್ನು ಹಾಡುತ್ತ ಮನರಂಜನೆ ನೀಡುವುದು ಕೆಲವು ಜಾತಿಗಳ ವೃತ್ತಿಯೇ ಆಗಿದೆ. 

`ಖ್ಯಾಲ್ ಹಾಗೂ ಖಯಾಲ್ ಲೋಕನಾಟ್ಯಕ್ಕಾಗಿ ಉಪಯೋಗವಾಗುವಂಥ ಕಾವ್ಯವಾಗಿವೆ. ದೂಹಾ ಚೌಬೋಲಾ, ಶೇರ್, ಕಬಿತ್ತ, ಛಪ್ಪಯ್ಯ ಇತ್ಯಾದಿ ಛಂದಸ್ಸಿನಲ್ಲಿ ರಚಿತವಾಗಿವೆ. ಅನೇಕ ಕವಿಗಳು ರಚಿಸಿದ ನೂರಾರು ಖ್ಯಾಲ್‍ಗಳು ರಾಜಸ್ತಾನಿಯಲ್ಲಿ ಪ್ರಚಲಿತವಿವೆ. ಜಿಣಮಾತಾರೋ ಗೀತ ಮತ್ತು ಡೂಗ್‍ಜೀ ಜವಾರಾಜೀರೋ ಗೀತ ಎಂಬ ಎರಡು ಖಯಾಲ್‍ಗಳು ಜನಪ್ರಿಯವಾಗಿವೆ. ಖ್ಯಾಲ್‍ಗಳಲ್ಲಿ ವೀರಪುರುಷರ ಬಗ್ಗೆ ಕಥೆ ಕಟ್ಟಲಾಗಿದೆ. ಶ್ರೀಮಂತರನ್ನು ಲೂಟಿಮಾಡಿ ಬಡವರಿಗೆ ಸಹಾಯ ಮಾಡುವ ಡಾಕೂಗಳ ಮೇಲೂ ಕಥೆಗಳನ್ನು ಕಟ್ಟಿ ಹಾಡಲಾಗಿದೆ.
`ಪವಾಡೆ ಎಂಬ ಹೆಸರಿನಲ್ಲಿ ಅನೇಕ ವೀರಗಾಥೆಗಳು ಪ್ರಸಿದ್ಧವಾಗಿವೆ. ದೇಶ, ಸತೀ ಸಾಧ್ವಿಯರು, ಜನತೆ ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣ ಮಾಡಿದ ವೀರಪುಂಗವರನ್ನು ರಾಜಸ್ತಾನೀಯರು ದೇವರೆಂದೇ ಪೂಜಿಸುತ್ತಾರೆ. ಇಂಥವರನ್ನು ಕುರಿತ ಹಾಡುಗಳೇ ಪವಾಡೆಗಳು. ಪಾಬೂಜೀಯ ಪವಾಡೆಗಳು ಅಧಿಕ ಸಂಖ್ಯೆಯಲ್ಲಿದ್ದು ಜನಪ್ರಿಯವಾಗಿವೆ. ಪಾಬೂಜೀ ಎಂಬಾತ ಗೋಧನದ ರಕ್ಷಣೆಗಾಗಿ ಹೋರಾಡಿ ವೀರಗತಿಯನ್ನು ಹೊಂದಿದವನು. `ಏಕತಾ-ಏಕತಾ ಎಂಬ ಯಶೋಗೀತ ರಾಜಸ್ತಾನೀಯರನ್ನು ಪುಳಕಿತಗೊಳಿಸಿದೆ.
ಗೋಗಾಚೀ ಹಾಹೀ ನಾನದಿಯ ಎಂಬ ವೀರದೇವರ `ಪವಾಡೆಗಳು ರಾಜಸ್ತಾನಿ ಭಾಷೆಯಲ್ಲಿ ರಚಿತವಾಗಿವೆ. ಪೃಥ್ವೀರಾಜ ಚೌಹಾಣನ ವಂಶಜನಾಗಿದ್ದ ಗೋಗಾಜಿಯು ಘಸ್ನಿ ಮಹಮ್ಮದನೊಡನೆ ನಡೆದ ಯುದ್ಧದಲ್ಲಿ ಮಡಿದನೆಂದು ತಿಳಿದುಬರುತ್ತದೆ.

ಬಾತ ಮತ್ತು ಖ್ಯಾತ : ರಾಜಸ್ತಾನಿ ಪ್ರಾಚೀನ ಗದ್ಯಸಾಹಿತ್ಯ ಅತ್ಯಂತ ಸಮೃದ್ಧವಿದೆ. ಇಂದಿಗೂ ಅಸಂಖ್ಯ ಬಾತ, ಖ್ಯಾತ, ಮ್ಹಣೀ ಮೊದಲಾದ ಪ್ರಕಾರಗಳು ಹಳೆಯ ಗ್ರಂಥಗಳಲ್ಲಿ ಕಾಣಸಿಗುತ್ತವೆ. ಭಾಟ್-ಚಾರಣರು ಅನೇಕ ಬಾತ ಮತ್ತು ಖ್ಯಾತಗಳನ್ನು ರಚಿಸಿ ರಾಜಸ್ತಾನಿ ಗದ್ಯ ಭಂಡಾರವನ್ನು ಸಮೃದ್ಧಗೊಳಿಸಿದ್ದಾರೆ. ಐತಿಹಾಸಿಕ, ಆಧ್ಯಾತ್ಮಿಕ, ಹಾಗೂ ಕಾಲ್ಪನಿಕ-ಹೀಗೆ ಎಲ್ಲ ಬಗೆಯ ಜನಪದಕಥೆಗಳಿವೆ.

ನೈಣಸೀ ರೀಖ್ಯಾತ್ ಎಂಬುದು ರಾಜಸ್ತಾನಿ ಗದ್ಯದ ಒಂದು ಅಪೂರ್ವ ಉದಾಹರಣೆ. ನೈಣಸೀ ಮುಣಹೋತ್, ಬಾಂಕೀದಾಸ ಅಸಿಯಾ ಹಾಗೂ ದಯಾಲದಾಸ ಸಿಂಘಾಯ-ಇವರು ಖ್ಯಾತ ರಾಜಸ್ತಾನಿ ಗದ್ಯ ಲೇಖಕರು. ಬಾಂಕೀದಾಸನ ಖ್ಯಾತ ಅನೇಕ ಗಾಥಾ ಸಂಗ್ರಹವಾಗಿದ್ದರೆ, ದಯಾಲದಾಸನ ಖ್ಯಾತ ಅನೇಕ ಜನಪದ ಕಥಾ ಸಂಗ್ರಹವಾಗಿದೆ.

ರಾಜಸ್ತಾನಿ ಜನಪದಗೀತಸಾಹಿತ್ಯವೂ ಸಮೃದ್ಧವಾಗಿದೆ. ಗರ್ಭಿಣಿಯಿದ್ದಾಗ, ಶಿಶುಜನನವಾದಾಗ, ಮಕ್ಕಳಿಗೆ ಅನಾರೋಗ್ಯ ಉಂಟಾದಾಗ, ದೇವದೇವತೆಗಳನ್ನು ಪ್ರಾರ್ಥಿಸುವಾಗ ಹೇಳುವ ವಿವಿಧ ಗೀತಗಳಿವೆ. ಅಲ್ಲದೆ ಋತುಗೀತೆ, ಶ್ರಮಗೀತೆ, ಪ್ರೇಮಗೀತೆ, ಬಾಲಗೀತೆಗಳು ಅಪಾರಸಂಖ್ಯೆಯಲ್ಲಿವೆ.

ಘೂಮರ, ಕೋಲಾಟ, ರಾಸ-ಈ ನೃತ್ಯಗಳನ್ನು ಮಾಡುವಾಗ ಹಾಡುವ ಗೀತೆಗಳು ಅಪಾರ ಸಂಖ್ಯೆಯಲ್ಲಿವೆ. ದಾಂಪತ್ಯ, ಸಂಯೋಗ, ವಿಯೋಗಗಳಿಗೆ ಸಂಬಂಧಿಸಿದ ಗೀತೆಗಳೂ ಅಸಂಖ್ಯಾತವಾಗಿವೆ. ಇಂಥ ಗೀತೆಗಳನ್ನು ಝೋರಾವಾ ಎನ್ನುತ್ತಾರೆ.

ರಾಜಸ್ತಾನಿ ಮಹಿಳೆಯರಿಗೆ ಚೈತ್ರದ ಗಣಗೌರ್, ಶ್ರಾವಣದ ತೀಜ್-ಇವು ಸೌಭಾಗ್ಯವರ್ಧಕ ಉತ್ಸವಗಳಾಗಿದ್ದು, ಇವಕ್ಕೆ ಸಂಬಂಧಿಸಿದ ಅನೇಕ ಹಾಡುಗಳನ್ನು ಆಯಾ ಸಂದರ್ಭಗಳಲ್ಲಿ ಹಾಡುತ್ತಾರೆ. ರಾವಣಜಾಡೋ ಚೋಮಾಸೋ, ಬಾರಹಮಾಸೋ-ಇವು ಋತುಗೀತೆಗಳು. ವಿವಾಹದ ಪ್ರತಿಯೊಂದು ವಿಧಿಗೆ ಸಂಬಂಧಿಸಿದ ಜನಪದಗೀತೆಗಳೂ ಇವೆ.
ಪಣಿಹಾರೀ ಗೀತೆಗಳು ಅತ್ಯಂತ ಜನಪ್ರಿಯವಾದುವು. ಪಣಿಹಾರೀ ಎಂದರೆ ತರಲು ಕೆರೆಯ ಕಡೆಗೆ ಹೋದ ಸ್ತ್ರೀ ಎಂದು ಅರ್ಥ. ಹಾಸ್ಯ-ವಿನೋದ, ಪ್ರತೀಕ್ಷೆ ಇತ್ಯಾದಿ ಅನೇಕ ಭಾವಗಳು ಈ ಪಣಿಹಾರೀ ಗೀತೆಗಳಲ್ಲಿವೆ. ಇಂಥ ಗೀತೆಗಳಲ್ಲಿ ರಾಜಸ್ತಾನಿ ಸ್ತ್ರೀಯರ ಜ್ವಲಂತ ಸತೀತ್ವಕ್ಕೆ ಸಂಬಂಧಿಸಿದ ಘಟನೆಗಳು, ಸಂದರ್ಭಗಳು ನಿರೂಪಿತವಾಗಿವೆ.
ರಾಜಸ್ತಾನಿ ಭಾಷೆಯಲ್ಲಿ ಅನೇಕ ಜನಪದಗೀತೆಗಳ ಸಂಕಲನಗಳು ಹೊರಬಂದಿವೆ. ಮೋತಿಲಾಲ್ ಮೆನಾರಿಯ ರಾಜಸ್ತಾನದ ಪಿಂಗಲ್ ಸಾಹಿತ್ಯದ ಬಗ್ಗೆ, ಮೋಹನಲಾಲ್ ಜಿಜ್ಞಾಸು ಚಾರಿಣೀ ಸಾಹಿತ್ಯದ ಬಗ್ಗೆ, ಹರೀಶ್ ರಾಜಸ್ತಾನಿಯ ಆದಿ ಕಾಲದ ಬಗ್ಗೆ, ಜಗದೀಶ್ ಪ್ರಸಾದ್ ಶ್ರೀವಾಸ್ತವ ಡಿಂಗಲ್, ಸಾಹಿತ್ಯದ ಬಗ್ಗೆ, ಅಚಲ್ ಶರ್ಮಾ ರಾಜಸ್ತಾನಿ ಗದ್ಯದ ಉಗಮ ಮತ್ತು ವಿಕಾಸದ ಬಗ್ಗೆ ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ಅಗರ್‍ಚಂದ್ ನಾಹತಾ, ಸೂರ್ಯಕರಣ್ ಪಾರೀಖ್, ರಾಣೀ ಲಕ್ಷ್ಮೀಕುಮಾರಿ ಚೂಂಡಾವತ್-ಇವರು ರಾಜಸ್ತಾನಿ ಜನಪದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.				
(ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ